ತೇರು -
ವಾರ್ಷಿಕ ಉತ್ಸವ ಸಮಾರಂಭದಲ್ಲಿ ಉತ್ಸವ ಮೂರ್ತಿಯನ್ನು ಕೂಡಿಸಿ ಮೆರವಣಿಗೆ ಮಾಡಲು ಬಳಸುವ ನಾಲ್ಕು ಗಾಲಿಯ ಸಾಲಂಕೃತ ವಾಹನ. ಇದನ್ನು ರಥ ಎಂದೂ ಕರೆಯುವುದಿದೆ. ರಥೋತ್ಸವ ಎಂಬ ಅರ್ಥದಲ್ಲೂ ತೇರು ಪದವನ್ನು ಬಳಸಲಾಗುತ್ತದೆ. ಪ್ರಮುಖ ದೇವಸ್ಥಾನಗಳಲ್ಲೆಲ್ಲ ತೇರು ಇದ್ದೇ ಇರುತ್ತದೆ.

	ವಿನ್ಯಾಸ, ರಚನೆ, ಕಲಾಕೌಶಲ್ಯದಿಂದ ಅಲಂಕೃತವಾಗಿ ತೇರುಗಳು ನಿಜಕ್ಕೂ ಕಣ್ಮನಗಳನ್ನು ಸೆಳೆಯುತ್ತವೆ. ಆದುದರಿಂದ ತೇರು ಕೆತ್ತುವ ಮತ್ತು ಕಟ್ಟುವ ಶಿಲ್ಪಿಯ ಕೆಲಸ ಲಲಿತಕಲೆಗಳಲ್ಲೊಂದೆನಿಸಿದೆ. ಶಕುನ-ಅಪಶಕುನಗಳಲ್ಲಿ ನಂಬಿಕೆಯಿದ್ದ ಸಮಯದಲ್ಲಿ ತೇರು ರಚನೆಯ ಅವಧಿಯಲ್ಲಿ ಯಾವುದೇ, ಅನಿಷ್ಟ ಘಟನೆ ನಡೆಯದೇ ಇರುವಂತೆ ನೋಡಿಕೊಳ್ಳುತ್ತಿದ್ದರು. ದೇವರು ಮಹಿಮೆ ಪರಾಕ್ರಮ ಹಾಗೂ ಐಶ್ವರ್ಯಕ್ಕೆ ಅನುಗುಣವಾಗಿ ತೇರಿನ ಆಕಾರ, ಗಾತ್ರ ಭವ್ಯತೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಕದಂಬ, ಗಂಗ, ಚಾಳುಕ್ಯ, ಹೊಯ್ಸಳ, ಮತ್ತು ವಿಜಯನಗರದ ರಾಜರ ಆಳಿಕೆಯಲ್ಲಿ ಸುಂದರವಾದ ತೇರುಗಳು ರಚಿಸಲ್ಪಟ್ಟವು. ಹಂಪೆಯಲ್ಲಿ ವಿಜಯವಿಟ್ಠಲನ ಗುಡಿಯ ಒಳಭಾಗದಲ್ಲಿ ಶ್ರೀ ಕೃಷ್ಣದೇವರಾಯ ಮಾಡಿಸಿದ (1513) 36 ಅಡಿ ಎತ್ತರದ ಪ್ರಸಿದ್ಧ ಕಲ್ಲಿನ ತೇರಿದೆ. ಅದರಲ್ಲಿ ಕೆತ್ತಿದ ಸುಂದರ ಚಿತ್ರಗಳು ಶಿಲ್ಪಿಯ ಕಲಾಕೌಶಲ್ಯವನ್ನು ಚೆನ್ನಾಗಿ ವ್ಯಕ್ತಪಡಿಸುತ್ತವೆ. ಕೋಣಾರ್ಕದ ಅರಸು ನರಸಿಂಹ ದೇವನ ಕಾಲದಲ್ಲಿ ಕಟ್ಟಲಾದ ಸೂರ್ಯದೇವಾಲಯ ಸೂರ್ಯದೇವನ ತೇರಿನ ಆಕಾರದಲ್ಲಿದೆ. ಸ್ವಾದಿಯ ಶ್ರೀ ಗುರುರಾಜ ತನ್ನ ಭೃತ್ಯ ಭೂತರಾಜನಿಂದ ಶ್ರೀರಮಾತ್ರಿವಿಕ್ರಮದೇವರ ಕಲ್ಲಿನ ತೇರನ್ನು ಬದರಿಕಾಶ್ರಮದಿಂದ ಎಳೆದು ತರಿಸಿ ಅಲ್ಲಿ ಪ್ರತಿಷ್ಠಾಪಿಸಿದನೆಂದು ಪ್ರತೀತಿ.

	ಪ್ರಾಚೀನ ಕಾಲದಲ್ಲಿ ರಚಿಸಲ್ಪಟ್ಟ ಕಲ್ಲಿನ ರಥಗಳು ದೇವಾಲಯಗಳಾಗಿ ಉಳಿದುಕೊಂಡವು. ಉತ್ಸವಗಳಲ್ಲಿ ಎಳೆಯುವ ರಥಗಳನ್ನು ಮೊದಲಿನಂತೆ ಇಂದಿಗೂ ಮರದಿಂದ ಮಾಡುವ ವಾಡಿಕೆಯಾಗಿದೆ. ರಥದ ರಚನಾಕಾರ್ಯ ಪ್ರಾರಂಭವಾಗುವ ಪೂರ್ವದಲ್ಲಿ ಅದರ ನಕ್ಷೆಯೊಂದನ್ನು ತಯಾರಿಸುವುದು ವಾಡಿಕೆಯಾಗಿದೆ. ರಥದ ರಚನೆಯ ವಿವರ ಇತ್ಯಾದಿಗಳನ್ನು ಶಿಲ್ಪಿ ಕಾಗದದ ಮೇಲೆ ಸೀಸಕಡ್ಡಿ ಅಥವಾ ಮಸಿಯಿಂದ ತಯಾರಿಸುತ್ತಾನೆ.

	ರಂಜಲ, ಗಂಧ, ತೇಗ, ಹೊನ್ನಿ, ನಂದಿ, ಹಲಸು, ಬೀಟೆ, ತಾರಿ, ಬೇವು, ಚಂದನ ಇತ್ಯಾದಿ ಮರಗಳನ್ನು ರಥಗಳ ರಚನೆಗೆ ಬಳಸುತ್ತಾರೆ. ಸಸ್ಯಶಾಸ್ತ್ರಜ್ಞರೂ ಶಿಲ್ಪಿಗಳೂ ಒಟ್ಟಿಗೆ ಸೇರಿ ಅರಣ್ಯವನ್ನು ಸುತ್ತಾಡಿ ಯೋಗ್ಯಮರಗಳನ್ನೇ ಚುನಾಯಿಸಿ ಶಾಸ್ತ್ರೋಕ್ತ ವಿಧಿವಿಧಾನಗಳಿಂದ ಪೂಜೆ ನೆರವೇರಿಸಿ ಮರ ಕಡಿಯುತ್ತಾರೆ. ರಥ ರಚಿಸುವ ಮುಖ್ಯ ಶಿಲ್ಪಿ ಕಟ್ಟಡ ಶಿಲ್ಪ, ಪ್ರತಿಮಾಶಿಲ್ಪ, ಆಗಮಗಳಲ್ಲಿನ ವಿವರಗಳು- ಎಲ್ಲವನ್ನು ಬಲ್ಲವನಾಗಿರಬೇಕು.

	ಅವನ ಸಲಹೆ ಮೇರೆಗೆ ಕೆಲಸ ಮಾಡಲು ಹಲವಾರು ಶಿಲ್ಪಿಗಳು ಅವನಿಗೆ ನೆರವಾಗುತ್ತಾರೆ. ತೇರುಗಳಲ್ಲಿ ಚೌಕು, ಅಷ್ಟಮ, ನಕ್ಷತ್ರ, ಕಮಲ, ದ್ವಾದಶ, ವರ್ತುಲಾಕೃತಿ ಇತ್ಯಾದಿ ಬಗೆಯ ರಚನೆಗಳು ರೂಢಿಯಲ್ಲಿ ಕಾಣಸಿಗುತ್ತವೆ. ರಚನೆಯ ಕಾರ್ಯ ಕೆಳಭಾಗದದಿಂದ ಮೇಲಕ್ಕೆ ಅಂತಸ್ತುಗಳಲ್ಲಿ ನಡೆಯುತ್ತದೆ. ತೇರಿನ ಗಾಲಿಗಳು ಸಾಮಾನ್ಯವಾಗಿ ಬಹು ದಪ್ಪವಾದ ಹಲಗೆಗಳಿಂದ ಮಾಡಿದಾಗಿರುತ್ತವೆ. ಅವು ಆಕೃತಿಯಲ್ಲಿ ಗಡಸುತನದಲ್ಲಿ ಒಡ್ಡರಬಂಡಿಯ ಗಾಲಿಗಳನ್ನು ಹೋಲುತ್ತವೆ. ತೇರಿನ ಗಡ್ಡೆಯ ಹೊರಮೈ ಸುತ್ತಲೂ ವಿವಿಧ ಆಕೃತಿಗಳೂ ಚಿತ್ರಗಳೂ ಕೆತ್ತಲ್ಪಡುತ್ತವೆ. ಅವುಗಳಲ್ಲಿ ಪಂಚತಂತ್ರಕಥೆ, ನವಗ್ರಹ, ದಶಾವತಾರ, ಪುರಾಣೇತಿಹಾಸ, ಕಾಮಶಾಸ್ತ್ರ, ಕಿನ್ನರ, ದ್ವಾರಪಾಲಕ, ಗಂಧರ್ವ, ದೇವತೆ, ಮನುಷ್ಯ, ಸ್ತ್ರೀಮೂರ್ತಿ, ದಂಪತಿ ವಿಗ್ರಹ, ಗಜಸಿಂಹ, ಕುಂಜರ, ಸಿಂಹ, ಮೊಸಳೆ, ಶರಭ, ಮಕರ, ನಾಗ, ಹನುಮಂತ, ಗರುಡ, ಪ್ರಾಣಿಪಕ್ಷಿ, ನೆಗಳು, ನಂದಿ, ಲತೆ, ಹೀಗೆ ಹಲವಾರು ಬಗೆಯ ಕುಸುರಿ ಕೆತ್ತನೆ ಕಂಡು ಬರುತ್ತದೆ. ನಿಂತ ಸಿಂಹದ ಜೋಡಿ, ಕೆಲವು ಕಡೆ ಕುದುರೆಗಳು, ಅಥವಾ ದ್ವಾರಪಾಲಕರ ಆಕೃತಿಗಳು ರಥದ ಹೊರಮೈಯಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಕಟ್ಟಿಗೆ ಎಣ್ಣೆ, ಹೊನ್ನೆಎಣ್ಣೆ, ಇತ್ತೀಚೆಗೆ ಫ್ರೆಂಚ್ ವಾರ್ನಿಷ್ ಅನ್ನು ತೇರಿಗೆ ಬಳಿದು ತಾಳಿಕೆ ಬರುವಂತೆ ಆಕರ್ಷಣೀಯವಾಗುವಂತೆ ಮಾಡುತ್ತಾರೆ. ಹೊರಮೈಯಲ್ಲಿ ಕೊರೆದ ನಕ್ಷೆಗೆ ಸರಿಹೊಂದುವಂತೆ ಬೆಳ್ಳಿಯ ತಗಡಿಗಳನ್ನು ಜೋಡಿಸುವ ವಿಧಾನ ಬಳಕೆಯಲ್ಲಿದೆ. ಚಕ್ರಗಳ ಪರಿಧಿಗೆ, ರಂಧ್ರಗಳಿಗೆ ಹಾಗೂ ಜೋಡಣೆಯ ಭಾಗಗಳಲ್ಲಿ ಲೋಹದ ಪಟ್ಟಿಗಳನ್ನು ಸೇರಿಸಿ ಹೆಚ್ಚುಕಾಲ ಬಾಳುವಂತೆ ಮಾಡುತ್ತಾರೆ. ತೇರನ್ನು ಸುಗಮವಾಗಿ ನಡೆಸಲು ಸನ್ನೆಗೋಲುಗಳನ್ನು ಬಳಸುತ್ತಾರೆ. ತೇರಿಗೆ ಕಟ್ಟಿದ ಎರಡು ಮಿಣಿಗಳನ್ನೂ ಭಕ್ತಾದಿಗಳು ಹಿಡಿದು ಎಳೆದಾಗ ತೇರು ಚಲಿಸುತ್ತದೆ. ಉತ್ಸವ ದಿನಕ್ಕೆ ವಾರ ಮೊದಲೇ ತೇರಿನ ಮೇಲ್ಭಾಗದಲ್ಲಿ ಶೃಂಗಾರದ ಗೋಪುರಗಳನ್ನು ಕಟ್ಟುತ್ತಾರೆ. ಗೋಪುರಗಳನ್ನು ನೆಲೆನೆಲೆಯಾಗಿ ಬಿದಿರು, ಬೆತ್ತ ಅಥವಾ ಅಡಕೆಮರದ ಪಟ್ಟಿಗಳಿಂದ ತಯಾರಿಸಿ, ವಿವಿಧ ಬಣ್ಣದ ಬಟ್ಟೆಯ ಪತಾಕೆಗಳನ್ನು ಸುತ್ತಲೂ ಸೇರಿಸುತ್ತಾರೆ. ಸಾಮಾನ್ಯವಾಗಿ ತೇರಿನ ನೆಲೆ 20' ಯಿಂದ80' ಎತ್ತರವಾಗಿರುತ್ತದೆ. ಬಂಗಾರ, ಬೆಳ್ಳಿ ಅಥವಾ ಹಿತ್ತಾಳೆಯ ಕಳಶವನ್ನು ನೆಲೆಯ ತುತ್ತ ತುದಿಯಲ್ಲಿ ಇಡುತ್ತಾರೆ. ಈಗೀಗ ವಿದ್ಯುದ್ದೀಪಗಳಿಂದ ಅಲಂಕರಿಸುವುದೂ ಉಂಟು.

	ತೇರು ಆಗುವಾಗ ಜಾತ್ರೆ ಸೇರುತ್ತದೆ. ಆದ್ದರಿಂದ ಅದು ಜನಕ್ಕೆ ಒಂದು ವಿನೋದದ ಕಾಲವೂ ಹೌದು. 

	ಒರಿಸ್ಸದ ಪುರಿ ಜಗನ್ನಾಥ ದೇವಾಲದಯದ ರಥೋತ್ಸವ ಇಡೀ ಭಾರತದಲ್ಲಿಯೇ ಒಂದು ಅದ್ಭುತ ಹಾಗೂ ಅಪೂರ್ವ ವಿಜೃಂಭಣೆಯ ಮಹಾ ಉತ್ಸವ. ತೇರು 45' ಎತ್ತರ 35' ಉದ್ದಗಲ ಇದೆ. 16 ಚಕ್ರಗಳುಳ್ಳ ದೇವಾಲಯ ಆಕೃತಿಯ ಅದರ ಆಕಾರ ಭವ್ಯ.

	ಉಜ್ಜಯಿನಿಯ ಮಹಾಬಲೇಶ್ವರ, ರಾಮೇಶ್ವರದ ಶಿವಲಿಂಗ, ಮಧುರೆಯ ಶಿವ-ಮೀನಾಕ್ಷಿ, ಹರಿದ್ವಾರ, ಪ್ರಯಾಗ ಮತ್ತು ಕಾಶೀ ರಥೋತ್ಸವಗಳು ಇತರ ಪ್ರಸಿದ್ಧ ಉತ್ಸವಗಳು. ಕನ್ನಡ ನಾಡಿನ ಹಿರಿಯೂರಿನ ಆದಿದೇವತೆ ತ್ಯಾಗ ಮಲ್ಲೇಶ್ವರ ಸ್ವಾಮಿಯ ರಥೋತ್ಸವ ನವದಂಪತಿಗಳಿಗೆ ಬಹು ಪ್ರಿಯ. ಏಕೆಂದರೆ ಅಂಥವರು ತೇರನ್ನು ಎಳೆದರೆ ಅವರ ಜೀವನ ಸೌಖ್ಯಮಯವಾಗುತ್ತದೆಂದು ನಂಬಿಕೆ. ಉಡುಪಿಯ ಶ್ರೀಕೃಷ್ಣನ ಬ್ರಹ್ಮರಥೋತ್ಸವ, ಶೃಂಗೇರಿಯ ಶಾರದಾ, ವಿದ್ಯಾಶಂಕರ ಮತ್ತು ಮಲಹಾನಿಕೇಶ್ವರ, ಮುಲ್ಕಿಯ ಶ್ರೀವೆಂಕಟರಮಣ,ಮಂಜೇಶ್ವರದ ಶ್ರೀ ಮದನಂತೇಶ್ವರ, ಕಾರ್ಕಳದ ಶ್ರೀ ವೆಂಕಟರಮಣ, ಬಂಟ್ವಾಳದ ಶ್ರೀತಿರುಮಲ ವೆಂಕಟ್ರಮಣಸ್ವಾಮಿ, ಕುಂದಾಪುರದ ಶ್ರೀ ವೆಂಕಟರಮಣ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿ, ಮಂಗಳೂರಿನ ಶ್ರೀ ವೆಂಕಟರಮಣ ಹಾಗೂ ಮಂಗಳಾದೇವಿ, ಧರ್ಮಸ್ಥಳದ ಶ್ರೀಮಂಜುನಾಥ, ಸುಬ್ರಹ್ಮಣ್ಯದ ಶ್ರೀಸುಬ್ರಹ್ಮಣ್ಯಸ್ವಾಮಿ, ಹಂಪೆಯ ಶ್ರೀಪಂಪವಿರೂಪಾಕ್ಷ, ಮಾಗಡಿಯ ಶ್ರೀರಂಗನಾಥಸ್ವಾಮಿ, ನಂಜನಗೂಡಿನ ಶ್ರೀ ನಂಜುಂಡೇಶ್ವರ, ಮೈಸೂರಿನ ಚಾಮುಂಡಾಂಬಿಕೆ, ಶಿರಸಿಯ ಶ್ರೀಮಾರಿಕಾಂಬ, ಬನವಾಸಿಯ ಮಧುಕೇಶ್ವರ, ಮಂಜುಗುಣಿಯ ಶ್ರೀವೆಂಕಟ್ರಮಣ, ಗೋಕರ್ಣದ ಶ್ರೀಮಹಾಬಲೇಶ್ವರ, ಉಳುವಿಯ ಶ್ರೀಬಸವೇಶ್ವರ, ಹುಬ್ಬಳ್ಳಿ ಸಿದ್ಧಾರೂಢಸ್ವಾಮಿ, ಸವದತ್ತಿಯ ಎಲ್ಲಮ್ಮ, ಸಿದ್ಧಗಂಗೆಯ ಶ್ರೀಗೋಸಲ ಸಿದ್ದೇಶ್ವರ, ಕೊಡಗಿನ ಓಂಕಾರೇಶ್ವರ, ಶಿಶುನಾಳದ ಶ್ರೀ ಶರೀಫ್ ಸಿದ್ದಯೋಗಿ, ಬಾದಾಮಿಯ ಬನಶಂಕರಿ, ಮಂಕಿಯ ಶ್ರೀಲಕ್ಷ್ಮೀನಾರಾಯಣ -ಈ ರಥೋತ್ಸವಗಳು ವರ್ಷವರ್ಷವೂ ತಮ್ಮದೇ ಆದ ವಿಶಿಷ್ಟ ವಿಜೃಂಭಣೆಯಿಂದ ಜರುಗುತ್ತವೆ.
(ನೋಡಿ- ಉತ್ಸವಗಳು)
(ನೋಡಿ- ಗುಡಿಗಾರಿಕೆ)									(ಆರ್.ಜಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ